ಪಂಜೆ ಮಂಗೇಶರಾವ್:-
1874-1937. ಮಕ್ಕಳ ಸಾಹಿತ್ಯದ ಪಿತಾಮಹ, ಸಣ್ಣಕಥೆ, ಕಥನಕವನ, ಹರಟೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಕೆಲಸ ಮಾಡಿದವರು. ಹುಟ್ಟಿದ್ದು ಬಂಟ್ವಾಳದಲ್ಲಿ; 1874 ಫೆಬ್ರುವರಿ 22ರಂದು. ತಂದೆ ರಾಮಪ್ಪಯ್ಯ, ತಾಯಿ ಸೀತಾಬಾಯಿ. ಪಂಜೆ ಇವರ ಪೂರ್ವಿಕರ ಸ್ಥಳ, ಇದೇ ಮನೆತನದ ಹೆಸರೂ ಆಯಿತು. ತಂದೆ ಊರಿನ ಶ್ಯಾನುಭೋಗರು. ಸದಾಚಾರ, ದೈವಭಕ್ತ ಸರಳತೆಗೆ ಹೆಸರಾದವರು. ತಾಯಿಯ ಧಾರ್ಮಿಕತೆ, ಪರೋಪಕಾರಕ ಬುದ್ಧಿಗಳು ಇವರ ಎಳೆಯ ವಯಸ್ಸಿನಲ್ಲಿ ತುಂಬ ಪರಿಣಾಮ ಬೀರಿದವು. ಮನೆಯಲ್ಲಿ ಆಗಾಗ್ಗೆ ನಡೆಯುತ್ತಿದ್ದ ಭಜನೆ, ಪ್ರವಚನ ಮುಂತಾದವು ಇವರಲ್ಲಿ ವಾಚನಾಭಿರುಚಿಯನ್ನು ಪದ್ಯಗಳನ್ನು ರಾಗವಾಗಿ ಹಾಡುವುದು ಮುಂತಾದವನ್ನು ಮೈಗೂಡಿಸಿದುವು. ಬಂಟ್ವಾಳದ ಶಾಲೆಯಲ್ಲಿ ಪಂಜೆಯವರ ಆರಂಭ ವ್ಯಾಸಂಗ ನಡೆಯಿತು. ಪ್ರೌಢವ್ಯಾಸಂಗಕ್ಕೆಂದು ಮಂಗಳೂರಿಗೆ ತೆರಳಿದರು. ಇದೇ ವೇಳೆ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದು ಕೊನೆಯುಸಿರೆಳೆದರು. ಹೀಗಾಗಿ ಪಂಜೆಯವರು ತಮ್ಮ 16ನೆಯ ವಯಸ್ಸಿನಲ್ಲೇ ಸಂಸಾರದ ಹೊರೆಹೊತ್ತರು. ವಿದ್ಯಾರ್ಥಿಗಳಿಗೆ ಪಾಠಹೇಳಿ ಸಂಸಾರ ನಿರ್ವಹಿಸಿ ತಾವೂ ಕಲಿತು ಬೆಳೆದರು. 1894ರಲ್ಲಿ ಬೆನಗಲ್ ರಾಮರಾಯರ ಸಹೋದರಿ ಗಿರಿಜಾಬಾಯಿ ಅವರನ್ನು ಮದುವೆಯಾದರು. 1896ರಲ್ಲಿ ಮಂಗಳೂರು ಸರ್ಕಾರಿ ಕಲಾಶಾಲೆಯಲ್ಲಿ ಇವರಿಗೆ ಕನ್ನಡ ಪಂಡಿತ ಕೆಲಸ ದೊರೆಯಿತು. ಶಾಲೆಯಲ್ಲಿ ಪದ್ಯಗಳನ್ನು ಅರ್ಥವತ್ತಾಗಿ, ಭಾವ ಪ್ರಚೋದಕವಾಗಿ ಸಾಭಿನಯವಾಗಿ ಹಾಡುತ್ತಿದ್ದರಲ್ಲದೆ ಗದ್ಯವನ್ನು ರಸವತ್ತಾಗಿ ಹೇಳುತ್ತಿದ್ದ ಇವರು ವಿದ್ಯಾರ್ಥಿ ಬಳಗದಲ್ಲಿ ಬಲುಬೇಗ ಜನಪ್ರಿಯರಾದರು. ಮದರಾಸಿಗೆ ಹೋಗಿ ಎಲ್.ಟಿ. ಪದವಿ ಪಡೆದು ಮಂಗಳೂರು ಶಿಕ್ಷಕರ ತರಬೇತು ಕಾಲೇಜು, ಮಡಿಕೇರಿ ಸರ್ಕಾರಿ ಶಾಲೆಗಳಲ್ಲಿ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಅನಂತರ ಮಂಗಳೂರು ರೇಂಜಿನಲ್ಲಿ ಡೆಪ್ಯೂಟಿ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದರು.

	ಪಂಜೆಯವರು ತಮ್ಮ ಉಪಾಧ್ಯಾಯ ವೃತ್ತಿಯ ಜೊತೆಗೆ ಬರವಣಿಗೆಯನ್ನು ಕೂಡ ರೂಢಿಸಿಕೊಂಡು ಬಂದರು. ಮಂಗಳೂರಿನ ಸುವಾಸಿನಿ ಪತ್ರಿಕೆಯಲ್ಲಿ ಇವರು ಬರೆದ 'ನನ್ನ ಚಿಕ್ಕತಂದೆ, 'ನನ್ನ ಚಿಕ್ಕ ತಂದೆಯ ವುಯಿಲು, 'ಕಮಲಾಪುರದ ಹೋಟ್ಲಿನಲ್ಲಿ ಮುಂತಾದ ಸರಸ ವಿನೋದ ಕಥೆಗಳು 'ಪೃಥುಲಾ, 'ದುರ್ಗಾವತಿ' ಮುಂತಾದ ಐತಿಹಾಸಿಕ ಕಥೆಗಳು; ಬೆಳಕು ಕಂಡವು. ಹರಟೆಮಲ್ಲ-ಕವಿಶಿಷ್ಯ ಎಂಬ ಗುಪ್ತನಾಮಗಳಿಂದ ತಮ್ಮ ಲೇಖನ, ಕಥೆಗಳನ್ನು ಪ್ರಕಟಿಸಿದ್ದಾರೆ.

	ಇವರ ಕೃತಿಗಳನ್ನು ಹೀಗೆ ವಿಭಾಗಿಸಬಹುದು: ಪದ್ಯಗದ್ಯಾತ್ಮಕ ಬಾಲಸಾಹಿತ್ಯ; ನೀಳ್ಗತೆಗಳು; ಚಾಟುಲೇಖನಗಳು; ಪ್ರಬಂಧಗಳು; ಸಂಶೋಧನಾತ್ಮಕ ಲೇಖನಗಳು; ಸಂಕಲಿತ ಸಂಪಾದಿತ ಕೃತಿಗಳು.

	ಕನ್ನಡದಲ್ಲಿ ಬಾಲ ಸಾಹಿತ್ಯರಚನೆ ಇವರಿಂದಲೇ ಆರಂಭವಾದಂತೆ ತೋರುತ್ತದೆ. ಮಕ್ಕಳ ಮನಸ್ಸನ್ನು ಅರಳಿಸುವ ವಸ್ತು; ಕಾಂತಿಯುತವಾದ ನುಡಿ, ಸರಳಗತಿ ಗಮಕಗಳಿಂದೊಪ್ಪುವ ಬಂಧ; ಉಚಿತ ಪ್ರಾಸ; ಕೇಳಿದೊಡನೆ ಭಾವಸ್ಪುರಣೆಯಾಗಿಸುವ ಅರ್ಥವ್ಯಕ್ತಿ ಈ ಗುಣಗಳಿರುವ ಇವರ ಶೈಲಿ ಮಾರ್ಮಿಕವಾದುದು. ಮಕ್ಕಳ ಪದ್ಯಗಳನ್ನು ಮಾತ್ರವಲ್ಲ; ಹಳೆಯ ಹಾಡುಗಳನ್ನು ಕೂಡ ಸಂಗ್ರಹಿಸಿ ಬೆಳಕಿಗೆ ತಂದಿದ್ದಾರೆ. 'ಕವಿಶಿಷ್ಯ ಎಂಬ ಗುಪ್ತನಾಮಾಂಕಿತವಾಗಿ ಪ್ರಕಟಗೊಂಡ ಇವರ ಕವನಗಳಲ್ಲಿ_ಹಾವಿನ ಹಾಡು, ತೆಂಕಣಗಾಳಿಯಾಟ, ಹುತ್ತರಿ ಹಾಡು ಮೊದಲಾದವು ಜನಪ್ರಿಯವಾಗಿವೆ. ನಾಗಣ್ಣನ ಕನ್ನಡಕ, ಡೊಂಬರ ಚೆನ್ನಿ, ಕಡೆಕಂಜಿ ಇವು ಲಘುಕಥನ ಪದ್ಯಗಳು. ಶಿಶುಗೀತಗಳನ್ನಲ್ಲದೆ ಅನೇಕ ಪ್ರೌಢ ಪದ್ಯಗಳನ್ನೂ ರಚಿಸಿದ್ದಾರೆ. ಅಣ್ಣನ ವಿಲಾಪ, ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? ಈ ಪದ್ಯಗಳಲ್ಲಿ ಕರುಣ ವೀರ ರಸಗಳ ಪಾಕವಿದೆ. ಪಾಣಿಪತಯುದ್ಧದ ವಸ್ತುವನ್ನೊಳಗೊಂಡ ಚಿಕ್ಕ ಯಕ್ಷಗಾನ ರಚಿಸಿದ್ದಾರೆ. ಇವರ ಮಕ್ಕಳ ಕತೆಗಳು (ಅಜ್ಜಿ ಕತೆಗಳು) ಅಪೂರ್ವ ಯಶಸ್ಸನ್ನು ಸಂಪಾದಿಸಿವೆ. ಎಳೆಯರ ಮನಸ್ಸನ್ನು ಸೆಳೆದುಕೊಂಡು ಹೋಗುವ ಉಕ್ತಿಭಂಗಿ; ವಯಸ್ಸಿನ, ಮನೋಬುದ್ಧಿ ಧರ್ಮಗಳ ತಾರತಮ್ಯಕ್ಕೆ ಅನುಗುಣವಾದ ಕಥನಕ್ರಮ: ಅವುಗಳಿಂದ ಆಶ್ವರ್ಯ ಪರಹಾಸಾದಿ ಭಾವಗಳನ್ನುಂಟುಮಾಡಿ ಮೈಮರೆಯಿಸುವ ಶಕ್ತಿ ಅವುಗಳಲ್ಲಿದೆ. 
ಪಂಜೆಮಂಗೇಶರಾಯರು ಸಣ್ಣಕತೆಗಳ ವಿಧಾತ ಎಂದು ಹಲ ವಿಮರ್ಶಕರ ಅಭಿಪ್ರಾಯವಿದೆ. 1901ರಷ್ಟು ಹಿಂದೆ ಸಣ್ಣ ಕತೆಗಳನ್ನು ಬರೆಯತೊಡಗಿದ್ದರು. ದುರ್ಗಾವತಿ, ಪೃಥುಲಾ, ವೀರಮತಿ ಇವು ನೀಳ್ಗತೆಗಳು. ನೀಳ್ಗತೆಯ ಪರಿಮಿತಿಯನ್ನು ಮೀರಿದ ಕೋಟಿ ಚೆನ್ನಯ ಒಂದು ಭೂತದ ಕತೆ; ವಸ್ತು, ಶೈಲಿ, ನಿರೂಪಣ ಕ್ರಮಗಳಲ್ಲಿ ವಿನೂತನವಾದದು. ತುಳುವಿನಲ್ಲಿ ಪಾಡ್ದನಗಳೆನಿಸುವ ವಚನಗಳ ರಾಶಿಯಿಂದ ಈ ವಸ್ತುವನ್ನೆತ್ತಿ, ಮೂಲದ ಇಂಪು, ನುಡಿಗಟ್ಟಿನ ಬೆಡಗು ಅಳಿಯದಂತೆ, ಕನ್ನಡದ ವಿಶಿಷ್ಟವಾದ ಶೈಲಿಯಲ್ಲಿ ಹೊಮ್ಮಿಸುವುದಕ್ಕೆ ಯತ್ನಿಸಿ ಕೃತಾರ್ಥರಾಗಿದ್ದಾರೆ. ಕತೆ ಹೀಗಿದೆ ತುಳುನಾಡನ್ನು, ಬಂಗಚೌಟ, ಅಜಿಲ ಎನ್ನುವ ಅರಸು ಮನೆತನಗಳು ಆಳುತ್ತಿದ್ದ ಕಾಲದಲ್ಲಿ ಪ್ರತಿಯೊಂದು ಸೀಮೆಯಲ್ಲಿ ಬಲ್ಲಾಳ ಎಂಬ ರಾಜಾಧಿಕಾರಿ ಇದ್ದ. ಕೋಟಿ ಚೆನ್ನಯರು ಜಾತಿಯಲ್ಲಿ ಬಿಲ್ಲವರು. ಪಡುಮಲೆ ಸೀಮೆಯಲ್ಲಿ ಹುಟ್ಟಿದವರು. ಹೋದಲ್ಲಿ ಬಂದಲ್ಲಿ ಬಲ್ಲಾಳರ ದ್ವೇಷ ಇವರನ್ನು ಬೆಂಬತ್ತಿದ್ದಿತು. ಪಡುಮಲೆಯಿಂದ ಪಂಜಕ್ಕೆ ಪಂಜದಿಂದ ಏಣ್ಮೂರಿಗೆ ಹೀಗೆ ಸ್ಥಾನಾಂತರ ಹೊಂದಿದ ಈ ವೀರರು ಏಣ್ಮೂರಿನ ಬಲ್ಲಾಳನ ಆಶ್ರಯ ಪಡೆದು ಅಲ್ಲಿಗೆ ದಂಡೆತ್ತಿ ಬಂದ ಪಡುಮಲೆ ಪಂಜಿಸೀಮೆಗಳ ಬಲ್ಲಾಳರ ವಿರುದ್ಧವಾಗಿ ಹೋರಾಡಿ ಅನುಪಮ ಸಾಹಸ ಪ್ರದರ್ಶಿಸಿ ವೀರೋಚಿತ ಮರಣಹೊಂದಿದ್ದರು. ಇವರ ಆತ್ಮಾಹುತಿಯ ಕಥೆಯಲ್ಲಿ, ವೀರಕರುಣರಸಗಳ ಹೃದಯಂಗಮ ಚಿತ್ರವಿದೆ. 
ಹರಟೆಮಲ್ಲನು ಮೊತ್ತಮೊದಲು ಕಾಣಿಸಿಕೊಂಡುದು ಸತ್ಯದೀಪಿಕೆ ಎನ್ನುವ ಕ್ರೈಸ್ತ ಮಾಸಪತ್ರಿಕೆಯಲ್ಲಿ (1905). ಈ ಅಂಕಿತದಲ್ಲಿ ಕೆಲವು ಕಾಲ ಪ್ರತಿ ತಿಂಗಳೂ ಪ್ರಚಲಿತ ವಿಷಯಗಳ ಬಗ್ಗೆ ಬರೆಯುತ್ತಿದ್ದರಾದ್ದರಿಂದ ಇವರನ್ನು ಕನ್ನಡದ ಪ್ರಥಮ ಅಂಕಣಕಾರರೆಂದೂ ಹೇಳಬಹುದಾಗಿದೆ. ಈ ಅಂಕಿತದಲ್ಲಿ ಬರೆದ ಇವರ ಹಲವು ಚಾಟುಲೇಖನಗಳು ಅನೇಕ ಪ್ರಚಲಿತ ವಿಷಯಗಳನ್ನು ಕುರಿತು ವಾಚಕರ ಮನಸ್ಸನ್ನು ಉದ್ಬೋಧಿಸುವ, ಕೆರಳಿಸುವ ಹಾಸ್ಯ ವಿಡಂಬನೆಗಳ ಸರಸಪಾಕವಾಗಿದೆ. ಸುವಾಸಿನಿ ಮಾಸಪತ್ರಿಕೆಯಲ್ಲಿ ಇವರು ಹಲವು ಆತ್ಮ ಪ್ರಬಂಧಗಳನ್ನು ಬರೆದಿದ್ದಾರೆ. ವ್ಯಕ್ತಿಗಳ ಆಶೆ, ಮೌಢ್ಯ, ವ್ಯವಹಾರಕುಶಲತೆ, ಮನಶ್ಚಾಪಲ್ಯ, ಅe್ಞÁನಾದಿಸ್ವಭಾವಗಳ ವರ್ಣರೇಖೆಗಳ ಸೊಗಸನ್ನು ಇವುಗಳಲ್ಲಿ ನೋಡಬಹುದು. ಇಂಥ ಸರಸ ಲೇಖನಗಳ ಜೊತೆಗೆ ಹಲವು ಸಂಶೋಧನಾತ್ಮಕ ಪ್ರಬಂಧಗಳನ್ನು ಕೂಡ ಬರೆದಿದ್ದಾರೆ. ಮೂಡಬಿದರೆಯ ಹೊಸಬದಿಯ ಶಿಲಾಶಾಸನಗಳು, ಬಿಳಗಿಯ ಕೆಲವು ಶಾಸನಗಳು; ಸ್ಥಳನಾಮ; ಪದಾರ್ಥವೇನು? ಇತ್ಯಾದಿ ಲೇಖನಗಳಲ್ಲಿ ಇವರ ಸಂಶೋಧನ-ವಿಮರ್ಶನ ಸಾಮಥ್ರ್ಯವನ್ನು ಗುರುತಿಸಬಹುದು. ಸಂಪಾದಿತ ಕೃತಿಗಳಲ್ಲಿ, ಬಾಸೆಲ್, ಮಿಶನ್ನಿನವರಿಂದ ಪ್ರಕಟಿಸಲ್ಪಟ್ಟ ಶಬ್ದ ಮಣಿದರ್ಪಣದ ತೃತೀಯಾವೃತ್ತಿ ಗಣನೀಯ. ಇವರ 'ಮೂಲ ವ್ಯಾಕರಣ'ವು ಮೊದಲ ಉದಾಹರಣೆಗಳು ಅನಂತರ ಸೂತ್ರ ಈ ರೀತಿ ರಚಿತವಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರಚುರವಾಗಿದ್ದ ಮೆಕ್ಮಿಲನರ ಕನ್ನಡ ಕ್ರಮಿಕ ಪುಸ್ತಕಗಳಲ್ಲಿ ಕೆಲವನ್ನು ಇವರು ಸಂಪಾದಿಸಿದರು. ಬಾಲಸಾಹಿತ್ಯ ಮಂಡಲಿಯ ಸ್ಥಾಪಕರೂ ಹೌದು. ಹಳ್ಳಿಯ ಜನರಲ್ಲಿ ಉಪಾಧ್ಯಾಯವರ್ಗಗಳಲ್ಲಿ, ಶಿಷ್ಯವೃಂದದಲ್ಲಿ, ಅಭಿಮಾನಿಗಳಾದ ಸಾಹಿತ್ಯಪ್ರೇಮಿಗಳಲ್ಲಿ ಕನ್ನಡ ಸಾಹಿತ್ಯ ರಸಸ್ವಾದನವನ್ನು ಉತ್ತೇಜಿಸಿದರು.

	ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಪಂಜೆಯವರು ನಿಕಟ ಸಂಪರ್ಕ ಹೊಂದಿದ್ದರು. ಮದರಾಸು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಂಜೆಯವರ ನಾಡುನುಡಿಗಳ ಸೇವೆ ಗಮನಿಸಿದ ಕನ್ನಡದ ಜನತೆ ಇವರನ್ನು 1934ರಲ್ಲಿ ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ದು ಗೌರವಿಸಿತು.

	ತಮ್ಮ ಕೊನೆಯ ದಿನಗಳಲ್ಲಿ ಪಂಜೆಯವರು ಹೈದರಾಬಾದಿನಲ್ಲಿ ತಮ್ಮ ಮಕ್ಕಳ ಮನೆಯಲ್ಲಿದ್ದುಕೊಂಡು ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿ ಕುಮಾರವ್ಯಾಸ ಭಾರತವನ್ನು ಸಂಪಾದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ನ್ಯೂಮೋನಿಯ ಜ್ವರಕ್ಕೆ ತುತ್ತಾಗಿ 1937 ಅಕ್ಟೋಬರ್ 25ರಂದು ತೀರಿಕೊಂಡರು. 				
 (ಕೆ.ಎಸ್.ಬಿ.ಎಚ್.ಎ.)
ಪರಿಷ್ಕರಣೆ:
ಡಾ|| ಶ್ರೀನಿವಾಸ ಹಾವನೂರ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ